Friday 9 March 2012

ಮಾನಾಪಮಾನಗಳ ಎಲ್ಲೆಯನ್ನು ಮೀರಿ....


ಪಂಡಿತ ಮದನ ಮೋಹನ ಮಾಳವೀಯ
ರಾಷ್ಟ್ರನಿರ್ಮಾತೃಗಳಲ್ಲಿ ಒಬ್ಬರೆನಿಸಿದ ಪಂಡಿತ ಮದನ ಮೋಹನ ಮಾಳವೀಯರು ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಸ್ಥಾಪಕರು. ಒಂದು ಮಾದರಿ ವಿಶ್ವವಿದ್ಯಾನಿಲಯವನ್ನ ಕಟ್ಟಬೇಕೆಂದಿದ್ದ ಅವರು ಜೋಳಿಗೆ ಹಿಡಿದು ರಾಜ ಮಹಾರಾಜರು, ಶ್ರೀಮಂತ ವಣಿಕರು, ಎಲ್ಲೆಡೆಯೂ ಹೋಗಿ ಭಿಕ್ಷೆಯೆಂಬಂತೆ ಹಣ ಸಂಗ್ರಹಿಸುತ್ತಿದ್ದರು.  ಪ್ರಪಂಚದ ಶ್ರೀಮಂತರಲ್ಲಿ ಅಂದಿನ ದಿನಮಾನಕ್ಕೆ ಹೈದರಾಬಾದಿನ ನಿಜಾಮ ಗಣಿಸಲ್ಪಡುತ್ತಿದ್ದ. ದೇಶ ತಿರುಗಿ ಸಂಗ್ರಹಿಸುತ್ತಿದ್ದ ಮಾಳವೀಯ ಹೈದರಬಾದಿಗೂ ಹೋದರು. ನಿಜಾಮನನ್ನು ಭೇಟಿಯಾಗಬಯಸಿದರು. ನಿಜಾಮನಿಗೆ ಸುದ್ದಿ ಹೋಯಿತು. “ಉತ್ತರ ಭಾರತದಿಂದ ಒಬ್ಬ ಬ್ರಾಹ್ಮಣ ಬಂದು ಬೇಡುತ್ತಿದ್ದಾರೆ, ವಿಶ್ವವಿದ್ಯಾನಿಲಯ ಕಟ್ಟಲಂತೆ.” ನಿಜಾಮ ನಿರಾಕರಿಸಿಬಿಟ್ಟ.

ನಿಜಾಮನ ಅರಮನೆಯಿಂದ ಬರಿಗೈಲಿ ವಾಪಸಾದರೂ ಧನ ಸಂಗ್ರಹಣದ ಧ್ಯೇಯ ಅವರಲ್ಲಿತ್ತು. ಆ ಸಮಯದಲ್ಲಿ ಅಲ್ಲೇ ಯಾರೋ ಶ್ರೀಮಂತನೊಬ್ಬನ ಶವ ಸ್ಮಶಾನದ ಹಾದಿ ಹಿಡಿದಿತ್ತು. ಶವದ ಹಿಂದೆ ಹೊರಟವರು ಚೆಲ್ಲುತ್ತಿದ್ದ ನಾಣ್ಯಗಳನ್ನು ಮಾಳವೀಯ ಆಯತೊಡಗಿದರು. ಈ ಕಾರ್ಯ ನೋಡಿ, ಸುತ್ತಮುತ್ತಲಿನ ಜನ ಮಾಳವೀಯರ ಉದ್ದೇಶವನ್ನ ಕೇಳಿ ತಿಳಿದು ನಾಣ್ಯಗಳನ್ನ ಆಯ್ದು ಕೊಡತೊಡಗಿದರು. ಜೋಳಿಗೆ ತುಂಬತೊಡಗಿತು. ಸುದ್ದಿ ತಿಳಿದ ನಿಜಾಮನಿಗೆ ನಾಚಿಕೆಯಾಯಿತು. ಮಾಳವೀಯರನ್ನ ಮತ್ತೆ ಕರೆಸಿ ಹೇರಳವಾಗಿ ದಾನ ಕೊಟ್ಟ.

ಇನ್ನೊಂದು ದಂತಕಥೆ ಹೀಗಿದೆ. (ಈ ಕಥೆಯನ್ನ ನಾನು ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಸಮಾರಂಭವೊಂದರಲ್ಲಿ ಹೇಳಿದೆ. ಅಲ್ಲಿ ನೆರೆದಿದ್ದ ವಿದ್ಯಾರ್ಥಿವೃಂದ ಮತ್ತು ಉಪನ್ಯಾಸಕರಿಗೇ ಈ ಪ್ರಸಂಗ ಗೊತ್ತಿರಲಿಲ್ಲವಂತೆ.)

ಮಾಳವೀಯ ನಿಜಾಮನ ಬಳಿ ಬಂದು ಜೋಳಿಗೆ ಹಿಡಿದರು

ನಿಜಾಮ: ಭಿಕ್ಷೆ ಎತ್ತಲು ನಾಚಿಕೆಯಿಲ್ಲವೆ?
ಮಾಳವೀಯ: ಬ್ರಾಹ್ಮಣನಿಗೆ ಭಿಕ್ಷೆ ಎತ್ತಲು ಎಂಥಾ ನಾಚಿಕೆ ಮಹಾಸ್ವಾಮಿ.
ನಿಜಾಮ: ಏತಕ್ಕಾಗಿ ಹಣ ಕೊಡಬೇಕು.
ಮಾಳವೀಯ: ಕಾಶಿಯಲ್ಲಿ ಭಾರತೀಯರೇ ನಡೆಸುವ, ರಾಷ್ಟ್ರೀಯ ಭಾವನೆಯನ್ನ ಜಾಗೃತಗೊಳಿಸುವ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯ ಕಟ್ಟಬೇಕಿದೆ. ಅದಕ್ಕೆ ಹಣದ ಅಗತ್ಯವಿದೆ.
ನಿಜಾಮ: ವಿಶ್ವವಿದ್ಯಾನಿಲಯದ ಹೆಸರು?
ಮಾಳವೀಯ: ಕಾಶಿ ಹಿಂದೂ ವಿಶ್ವವಿದ್ಯಾನಿಲಯ.

ಮತಾಂಧನಾಗಿದ್ದ ನಿಜಾಮನಿಗೆ ಸಿಟ್ಟು ತಡೆಯಲಾಗಲಿಲ್ಲ. 
ನಿಜಾಮ: ಹಿಂದೂ ವಿಶ್ವವಿದ್ಯಾನಿಲಯ ಕಟ್ಟಲು ನನ್ನ ಬಳಿ ಹಣ ಕೇಳಲು ಬರಲು ಎಷ್ಟು ಧೈರ್ಯ?
ನಿಜಾಮ ಕೋಪದಲ್ಲಿ ಕಾಲಿಗೆ ಹಾಕಿದ ಚಪ್ಪಲಿ ತೆಗೆದು ಮಾಳವೀಯರ ಮುಖದ ಮೇಲೆ ಎಸೆದ

(ಕಥೆಗೆ ಒಂದೆರಡು ಕ್ಷಣ ವಿರಾಮಕೊಟ್ಟು ಎಲ್ಲರ ಮುಖ ನೋಡಿದೆ. ದಂತಕಥೆ ನಿಜವೇ ಆಗಿದ್ದರೆ ತಮ್ಮ ವಿಶ್ವವಿದ್ಯಾನಿಲಯದ ಸಂಸ್ಥಾಪಕನಿಗೆ ಆಗಿರಬಹುದಾದ ಅಪಮಾನದ ಆಘಾತ ಎಲ್ಲರ ಮುಖದಲ್ಲಿತ್ತು.
ಚಪ್ಪಲಿ ಸೇವೆ ಮಾಡಿಸಿಕೊಂಡವರು ಸಾಮಾನ್ಯರಾಗಿದ್ದರೆ ಅಪಮಾನಿತರಾಗುತ್ತಿದ್ದರು. ಅಪಮಾನವಾಯಿತೆಂದು ಭಾವಿಸಿಕೊಳ್ಳುತ್ತಿದ್ದರು. ನಾವು ಭಾವಿಸುವುದೇ ತಾನೇ ಸತ್ಯ!!!. ಆದರೆ ಏನು ಮಾಡಲು ಸಾಧ್ಯ. ಆತ ರಾಜ, ಒಬ್ಬ ಸಾಮಾನ್ಯ ತಿರುಕ ಬ್ರಾಹ್ಮಣ ಏನು ತಾನೇ ಮಾಡಲು ಸಾಧ್ಯ. ಅವುಡುಗಚ್ಚಿ ಮರಳಿ ಬರಬೇಕಷ್ಟೇ.)

ಮಾಳವೀಯರು ಯೋಗಪುರುಷರು, ಯಾವ ಭಾವವಿಕಾರಕ್ಕೂ ಒಳಗಾಗಲಿಲ್ಲ. ತಮ್ಮ ಮೇಲೆ ತೂರಿಬಂದ ಚಪ್ಪಲಿಯನ್ನ ತೆಗೆದುಕೊಂಡರು. ಅದರ ಮೇಲಿನ ಧೂಳನ್ನ ತಮ್ಮ ಉತ್ತರೀಯದಿಂದ ಒರೆಸಿ, ಕಂಕುಳಿಗಿಟ್ಟುಕೊಂಡರು. ವಿನಮ್ರತೆಯಿಂದ ಕೈಮುಗಿದು ಬಾಗಿ ನಮಸ್ಕರಿಸುತ್ತಾ  “ಮಹಾಪ್ರಸಾದ ಮಹಾಸ್ವಾಮಿ, ಉಪಕಾರವಾಯಿತು. ಧನ್ಯೋಸ್ಮಿ.” ಎಂದರು. ಅರಮನೆಯಿಂದ ಹೊರಟುಬಿಟ್ಟರು.

ನಿಜಾಮ ದಂಗುಬಡಿದು ಹೋದ. ಮಾಳವೀಯರ ಹಿಂದೆ ಆಳೊಬ್ಬನನ್ನು ಅಟ್ಟಿದ. ಅವನಿಗೆ ಆಶ್ಚರ್ಯ, ಅವ್ಯಕ್ತ ಭಯ, ನನ್ನ ಚಪ್ಪಲಿ ತೆಗೆದುಕೊಂಡು ಹೋಗಿ ಇವನೇನು ಮಾಡುತ್ತಾನೋ ಎಂದು.

ಮಾಳವೀಯ ಮಾರುಕಟ್ಟೆ ಪ್ರದೇಶಕ್ಕೆ ಹೋಗಿ ಘೋಷಣೆ ಮಾಡಿದರು. ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ದೇಣಿಗೆ ಕೇಳಿದಾಗ ನಿಜಾಮ ಅವರಿಗೆ ಚಪ್ಪಲಿಯನ್ನ ದಯಪಾಲಿಸಿದ್ದು, ಅದನ್ನ ಹರಾಜು ಹಾಕಿ ಬಂದ ಹಣವನ್ನ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಬಳಸಿಕೊಳ್ಳುತ್ತೇನೆ. ಆಸಕ್ತಿಯಿದ್ದವರು ಲೀಲಾವು ಕೂಗಬಹುದು ಎಂದು. ಅದೇನು ಸಾಮಾನ್ಯ ಚಪ್ಪಲಿಯಲ್ಲವಲ್ಲ. ಬೆಳ್ಳಿಯದು. ಮೇಲಾಗಿ ನಿಜಾಮನದು, ಬೆಲೆಬಾಳುವಂಥದ್ದು.

ಆಸಕ್ತರು ಹರಾಜು ಕೂಗತೊಡಗಿದರು. ನಿಜಾಮನಿಗೆ ಸುದ್ದಿ ಹೋಯ್ತು. ತನ್ನ ಚಪ್ಪಲಿ ಯಾರೋ ದಾರಿಹೋಕ ಕೊಂಡರೆ, ಅಥವಾ ಕಡಿಮೆ ಬೆಲೆಗೆ ಮಾರಾಟವಾದರೆ ತನಗೆ ಅವಮಾನವೆಂದು ಭಾವಿಸಿದ ನಿಜಾಮ ತಾನೇ ದೊಡ್ಡ ಮೊತ್ತ ತೆತ್ತು ತನ್ನ ಚಪ್ಪಲಿಯನ್ನ ಮರಳಿ ಕೊಂಡ. ಆ ಹಣವನ್ನ ವಿಶ್ವವಿದ್ಯಾನಿಲಯ ನಿರ್ಮಾಣ ನಿಧಿಗೆ ಮಾಳವೀಯ ಸೇರಿಸಿಕೊಂಡರು.

ಕಥೆಯ ಸತ್ಯಾಸತ್ಯತೆಗಳೇನೇ ಇರಲಿ. ನೋಡಬೇಕಾದದ್ದು ಕಲಿಯಬೇಕಾದದ್ದು ಮಾಳವೀಯರ ಮನೋಭಾವ. ತಮ್ಮ ಧ್ಯೇಯವನ್ನ ಬಿಟ್ಟು ಅವರಿಗಿನ್ನೇನೂ ಮುಖ್ಯವಾಗಿರಲಿಲ್ಲ. ಮಾನಾಪಮಾನಗಳ ಚಿಂತೆಯೂ ಅವರಿಗಿರಲಿಲ್ಲ. ಶವ ಮೆರವಣಿಗೆಯ ನಾಣ್ಯ ಆಯುವುದಿರಲಿ, ಚಪ್ಪಲ್ಲಿ ಎಸೆಸಿ ಕೊಂಡ ಸನ್ನಿವೇಶವಾಗಲಿ ಅವರಿಗೆ ಅವಮಾನವೆನ್ನಿಸಲೇ ಇಲ್ಲ, ಏಕೆಂದರೆ ಅವರು ಅದನ್ನ ಅವಮಾನವೆಂದುಕೊಳ್ಳಲೇ ಇಲ್ಲ. ನಾಣ್ಯಗಳಲ್ಲಿ ಅವರಿಗೆ ಕಂಡಿದ್ದು ಹಣ. ಚಪ್ಪಲ್ಲಿಯಲ್ಲಿ ಅವರಿಗೆ ಕಂಡದ್ದು ಬೆಳ್ಳಿ ಮತ್ತು ನಿಜಾಮನ ಚಪ್ಪಲಿಯೆಂಬ ವಿಷಯ ತರಬಹುದಾದ ಹಣ. Out-of-Box thinking ಮಾಡಲು ಆಗಷ್ಟೇ ಸಾಧ್ಯ. ಧ್ಯೇಯದ ಮುಂದೆ ಸ್ವಂತಿಕೆಯನ್ನ ಮರೆಯುವಷ್ಟು ಅರ್ಪಿತ ಮನೋಭಾವ. ತನ್ನನ್ನು ತಾನು ಗೆದ್ದ, ತನ್ನನ್ನು ತಾನು ಶೂನ್ಯವಾಗಿಸಿಕೊಂಡ ಮಹಾಪುರುಷರು ಅವರು.

ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಮಹಾದ್ವಾರ.
ವಿಶ್ವವಿದ್ಯಾನಿಲಯ ಕಟ್ಟಲು ಅವರು ಬೇಡಿ ಗಳಿಸಿದ್ದು ಆ ದಿನಗಳಲ್ಲೇ ಒಂದು ಕೋಟಿ ಮೂವ್ವತ್ತನಾಲ್ಕು ಲಕ್ಷ ರೂಪಾಯಿಗಳು, ಮತ್ತು “ಭಿಕ್ಷುಕರ ಚಕ್ರವರ್ತಿ” ಎಂಬ ಬಿರುದು, ಮಾಳವೀಯರ ಇಚ್ಚಾಶಕ್ತಿ ಮತ್ತು ಸಮರ್ಪಣೆಯನ್ನ ಕಂಡ ಗಾಂಧಿ ಹೇಳಿದ್ದು “ನನ್ನ ಹಿರಿಯಣ್ಣನಂತಹ ಮಾಳವೀಯರಿಂದ ನಾನು ಬೇಡುವುದನ್ನ ಕಲಿತೆ.”

ದಂತ ಕಥೆ ಸತ್ಯವೋ ಕಪೋಲಕಲ್ಪಿತವೋ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ನಮ್ಮನ್ನು ನಾವು ಗೆಲ್ಲಬೇಕೆಂಬ ನೀತಿಯಂತೂ ಸುಂದರವಲ್ಲವೇ. ನೀವೇನಂತೀರಿ!!!

7 comments:

  1. This real story is a great piece of information for me in my Life. Katheyannu Odi mareyuva badalu, adara thathvavannu jeevanadalli aLavadisikondare, jeevana innastu artha purna. hanchikondadakke dhanyavaadagaLu Raaji yavare :)

    ReplyDelete
    Replies
    1. Thank you Anonymous, ನೀವು ಯಾರು ಎಂದು ನಿಮ್ಮ ಭಾಷೆಯನ್ನ ನೋಡಿಯೇ ನಾನು ಬಲ್ಲೆನಾದರೂ ನೀವು Anonymous ಆಗುವುದರ ಬದಲು ಒಂದು ಹೆಸರಿನೊಂದಿಗಿದ್ದರೆ ಹಲವಾರು Anonymous ಗಳ ನಡುವೆ ಎಲ್ಲರೂ ಗುರುತಿಸಬಹುದು :)

      Delete
    2. >>ಧ್ಯೇಯವನ್ನ ಬಿಟ್ಟು ಅವರಿಗಿನ್ನೇನೂ ಮುಖ್ಯವಾಗಿರಲಿಲ್ಲ. ಮಾನಾಪಮಾನಗಳ ಚಿಂತೆಯೂ ಅವರಿಗಿರಲಿಲ್ಲ. ಶವ ಮೆರವಣಿಗೆಯ ನಾಣ್ಯ ಆಯುವುದಿರಲಿ, ಚಪ್ಪಲ್ಲಿ ಎಸೆಸಿ ಕೊಂಡ ಸನ್ನಿವೇಶವಾಗಲಿ ಅವರಿಗೆ ಅವಮಾನವೆನ್ನಿಸಲೇ ಇಲ್ಲ, ಏಕೆಂದರೆ ಅವರು ಅದನ್ನ ಅವಮಾನವೆಂದುಕೊಳ್ಳಲೇ ಇಲ್ಲ +೧

      ಪಂಡಿತ ಮದನ ಮೋಹನ ಮಾಳವೀಯ ಅವರ 'ಕಾಶಿ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪನೆಯ' ಬಗ್ಗೆ ಉತ್ತಮ ಮಾಹಿತಿ ಪೂರ್ಣ ಬರಹ.
      ಚೆನ್ನಾಗಿದೆ.
      ವಂದನೆಗಳೊಂದಿಗೆ
      ಕಂಡಷ್ಟೂ ಖಗೋಳ

      Delete
    3. ಧನ್ಯವಾದಗಳು ವಿದ್ಯಾಕುಮಾರ್‌ರವರೆ, ಅನಘ ಮಾನಸಕ್ಕೆ ಸ್ವಾಗತ. ಈ ಕಥೆಯ ಸತ್ಯಾಸತ್ಯತೆಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಮಾನಾಪಮಾನಗಳು, ಬೇರೆಯವರು ನಮಗೆ ಮಾಡುವಂತಹುದಲ್ಲ, ಅದನ್ನು ನಾವು ತೆಗೆದುಕೊಳ್ಳುವ ರೀತಿಯಲ್ಲಿರುತ್ತದೆ ಎಂಬ ತಥ್ಯವಷ್ಟೇ ನನ್ನ ಮನಸೆಳೆದದ್ದು.

      Delete
  2. ಕಾಶಿ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಏನನ್ನು ಕಲಿಸುತ್ತಾರೆ ಎಂದು ಬರೆದಿದ್ದರೆ ಚನ್ನಾಗಿತ್ತು

    ReplyDelete
    Replies
    1. ॒॒॒॒@suragange, ಕಾಶಿ ಹಿಂದೂ ವಿಶ್ವವಿದ್ಯಾನಿಲಯ ಇಂದು ಒಂದು ಕೇಂದ್ರೀಯ ವಿಶ್ವವಿದ್ಯಾಲಯ ಅದರ ಜಾಲತಾಣವೇ ಹೇಳುವಂತೆ ೧೪೦ ವಿದ್ಯಾಶಾಖೆಗಳ ವಿಭಾಗ (departments) ಗಳನ್ನು ಹೊಂದಿದ ಸಂಸ್ಥೆ. ಕಲಾ ವಿಭಾಗಗಳಿಂದ ಹಿಡಿದು, ತಂತ್ರಜ್ಞಾನದ ವಿಭಾಗಗಳವರೆಗೆ ಅಲ್ಲಿ ಶಿಕ್ಷಣ ದೊರೆಯುತ್ತದೆ. ಅಲ್ಲಿ ಕಳೆದ ೪-೫ ದಿನಗಳಲ್ಲಿ ನನಗನ್ನಿಸಿದ್ದು, ಎಲ್ಲವನ್ನೂ ಇದರ ಅಡಿಗೇ ಏಕೆ ತಂದಿದ್ದಾರೆ, ತಂತ್ರಜ್ಞಾನ ವಿಭಾಗಗಳಿಗೇ ಒಂದು ವಿಶ್ವವಿದ್ಯಾನಿಲಯ (ನಮ್ಮ ಕರ್ನಾಟಕದಲ್ಲಿಯ VTU ರೀತಿ), ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಾಗಿ ಒಡೆಯಬಾರದೇಕೆ ಎಂದು. ಅಲ್ಲಿನ ಫ್ರೊಫೆಸರೊಬ್ಬರಿಗೆ ಅದನ್ನೂ ಹೇಳಿಯೂ ಬಿಟ್ಟೆ. ಅವರು ನಕ್ಕು ಬಿಟ್ಟರು. ಇದು ಕರ್ನಾಟಕವಲ್ಲ, ಇಲ್ಲಿ ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. ನಮಗೇನೂ ತೊಂದರೆ ಇಲ್ಲ ಅಂದುಬಿಟ್ಟರು. (Non-sense, they don't know how easy to manage small units, ಎಂದುಕೊಂಡೆ.) ನಾನಲ್ಲಿಗೆ ಭೇಟಿನೀಡಿದ್ದು ಅಲ್ಲಿನ ಭಾಷಾ ವಿಜ್ಞಾನ ವಿಭಾಗಕ್ಕೆ, ಅಲ್ಲಿನ ವಿದ್ಯಾರ್ಥಿಗಳಿಗೆ, ಸಹಜ ಭಾಷಾ ಸಂಸ್ಕರಣೆಯ (Natural Language Processing) ವಿಷಯದ ಮೇಲೆ ಎರಡು ತರಗತಿ ತೆಗೆದುಕೊಳ್ಳುವುದಷ್ಟೇ ನನ್ನ ಕೆಲಸವಾಗಿದ್ದರಿಂದ ಬೇರೆ ವಿಭಾಗಗಳನ್ನ ಹೊರಗಿನಿಂದಷ್ಟೇ ನೋಡುವುದು ಸಾಧ್ಯವಾಯಿತು. ಬಿಡುವಿನ ವೇಳೆಯಲ್ಲಿ ಕಾಶಿಯ ಗಲ್ಲಿ, ಸ್ನಾನಘಟ್ಟಗಳ ನಡುವೆ ತಿರುಗುವುದೇ ಹೆಚ್ಚಿನ ಆಸಕ್ತಿಯ ವಿಷಯವಾಗಿತ್ತು. ನಿಮಗೆ ಪೂರ್ಣ ಚಿತ್ರಣವಲ್ಲದಿದ್ದರೂ ಸ್ವಲ್ಪ ಮಾಹಿತಿ ನಿಮಗೆ ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಜಾಲತಾಣ http://www.bhu.ac.in/ ನಲ್ಲಿ ಸಿಗಬಹುದು.

      Delete
    2. ತುಂಬ ಸುಂದರವಾಗಿ ಬರೆದಿದ್ದೀರಿ. ನ

      Delete