Sunday 19 November 2017

ನಾ ಪರದೆ ಸರಿಸೆನು: ಜೈಬ್-ಉನ್-ನಿಸಾ



"ನನ್ನ ನೀನು ಗೆಲ್ಲಲಾರೆ.... ತಿಳಿದೂ.... ತಿಳಿದೂ.... ಛಲವೇತಕೇ............?"

ಹೀಗೆ ಹೇಳುತ್ತಾ ಬಟ್ಟೆ ಬಿಚ್ಚಿ, ಹುಡುಗಿ ನಾಚಿದ ಕಾರಣಕ್ಕೆ ಅವಳನ್ನು ಸೋಲಿಸಿದನೆಂದು ಬೀಗಿದ ಗಂಡಿನ ಕಥೆ ಗೊತ್ತಿರಬೇಕು... ಅಂಥದ್ದೇ ಕಥೆ ಇದು
(ಅಂಥಾ ಗೆಲುವಿಗೆ ಗಂಡು ಜನ್ಮ ನಾಚಿಕೆ ಪಡಬೇಕು... ಅದು ಬೇರೆ ವಿಚಾರ ಬಿಡಿ.)
ಮೊಘಲ್ ಚಕ್ರವರ್ತಿಯಾಗಿದ್ದ ಮತಾಂಧ ಔರಂಗಜೇಬನ ಮಗಳಾದರೂ ಸ್ವತಂತ್ರ ಮನೋಭಾವದ ಜೈಬುನ್ನಿಸಾಳ ಅರಮನೆಯಲ್ಲಿ ಹಲವು ಮುಶಾಯಿರಗಳು ನಡೆಯುತ್ತಿದ್ದವು... ಅವಳ ಹಲವು ಪ್ರತಿಸ್ಪರ್ಧಿಗಳಲ್ಲಿ ನಾಸಿರ್ ಅಲಿಯೂ ಒಬ್ಬ. ನಾಸಿರ್ ಒಬ್ಬ ಸ್ವಾಭಿಮಾನಿ, ಬಡವ... 
ನಾಸಿರ್ ಅಲಿ ಒಮ್ಮೆ ಅವಳ ವಿರುದ್ದದ ಕಾವ್ಯಸ್ಪರ್ಧೆಯಾದ ಮುಶಾಯಿರಾದಲ್ಲಿ ಕಾವ್ಯಾತ್ಮಕವಾಗಿ ಹೇಳಿದ..

"ಓ ಚಂದ್ರನಿಗೂ ಅಸೂಯೆ ಮೂಡಿಸುವ ಹೆಣ್ಣೇ,
ಮುಖ ಪರದೆಯನ್ನೊಮ್ಮೆ ಸರಿಸು,
ನಿನ್ನ ವದನಾರವಿಂದದ ಚೆಲುವ ಸವಿವಕಾಶವನು ನೀಡು..."


ಅವಳಿಗಾಗದ ಕೆಲಸವನ್ನು ಹೇಳಿ ಅವಳನ್ನು ಸೋಲಿಸಿ ಬೀಗುವ ಗಂಡಿನ ಮಾಮೂಲಿ ಆಟ....

ಇದಕ್ಕೆ ಕಾವ್ಯಾತ್ಮಕವಾಗಿಯೇ ಉತ್ತರಿಸಬೇಕಾದುದು ಜೈಬುನ್ನಿಸಾಳ ಸರದಿ... ಇಲ್ಲದಿದ್ದರವಳು ಸೋತಳು..
ಜೈಬುನಿಸಾ ಒಬ್ಬ ಮುಸ್ಲಿಂ ಹೆಣ್ಣುಮಗಳು, ಮತಾಂಧ ತಂದೆಯ ನೆರಳಡಿ ಬೆಳೆದವಳು... ಅವಳು ಬೆಳೆದು ಬಂದ ಸಂಸ್ಕೃತಿಯಲ್ಲಿ ಎಲ್ಲರಿಗೂ ಮುಖಪರದೆ ಸರಿಸುವಂಥಹುದು ಅಲ್ಲ.. ಹಾಗೆಂದು ಅವಳು ಉತ್ತರಿಸದೆ ಸೋಲುವಂತೆಯೂ ಇರಲಿಲ್ಲ... ಅವಳಿಗಿದು ದೊಡ್ಡ ಪಂಥಾಹ್ವಾನ.

ಜೈಬುನ್ನಿಸಾಳ ಉತ್ತರ ಹೀಗಿತ್ತು........

"ನಾ ಪರದೆ ಸರಿಸೆನು
ಪರದೆ ಸರಿದರೇನು ಗತಿ ಗೊತ್ತೇನು?

.
ಪಿಕಳಾರ ತನ್ನ ಗುಲಾಬಿಯಿಂದ ದೂರಾಗಬಹುದು, 
ಲೌಕಿಕಾನಂದಕ್ಕಾಗಿಯೇ ದೇವಿ ಲಕ್ಷ್ಮೀಯನು
ಆದರಿಸಿ ಪೂಜಿಸುವ
ದೇಗುಲದ ಬ್ರಾಹ್ಮಣನೂ
ತಿರುಗಬಹುದು ನನ್ನೆಡೆಗೆ
ನನ್ನ ಮುಖ ದರ್ಶನಕೆ

ನನ್ನ ಚೆಲುವೇ ಗೆಲ್ಲಬಹುದು...
ಆದರೆ........
ಲತಾಕುಂಜದ ಪೊದರಿನಲಿ ಮರೆಯಾಗಿ ಕುಳಿತ ಚೆಲುವಿನ ಹೂ
ಸೌರಭದಿಂದಲೇ ತನ್ನ ಅಸ್ತಿತ್ವ ಸಾರುವಂತೆ


ನಾ ಬರೆವ ಸಾಲುಗಳಲ್ಲಿ ಮಾತ್ರ ನಾ ಉಳಿಯಬಯಸುವೆ....
ನಾ ಪರದೆ ಸರಿಸೆನು..
."


ಅಂದ ಹಾಗೆ ಜೈಬುನ್ನಿಸಾಳ ಕಾವ್ಯನಾಮ ಮಕ್ಫಿ... ಅಂದರೆ "ಗುಪ್ತವಾಗಿರುವಾಕೆ" ಅಂತ....
ಜೈಬುನ್ನಿಸಾಳ ಗಝಲ್ ಸಂಕಲನ, ದಿವಾನ್-ಎ-ಮಕ್ಫಿಯಿಂದ ಆಯ್ದ ಕೆಲವು ಸಾಲುಗಳು ಇವು

ಚಕ್ರವರ್ತಿಯ ಮಗಳು ನಾ, 
ಆದರೆ ವೈರಾಗ್ಯದಲ್ಲಿ ವೈಭವವನ್ನು ಕಾಣುವವಳು...
ನನ್ನ ಹೆಸರು ಜೈಬ್-ಉನ್-ನಿಸಾ, 
ಹೇಳುವರು ಅದರರ್ಥ ಸ್ತ್ರೀತ್ವದ ಮುಕುಟಮಣಿ...

ಪ್ರೇಮದ ಪುತ್ಥಳಿಯನು ಪೂಜಿಸುವೆ. ಮುಸಲ ನಾನಲ್ಲ..
ಅವಳ ವೇಣಿಯನು ಕೊರಳ ಸುತ್ತಿಸಿಕೊಳಲೆಂದು
ಇದ್ದ ಜನಿವಾರ ಕಿತ್ತೆಸೆದಿರುವ ನಾ ಬಾಮಣನೂ ಅಲ್ಲ

ಮಕ್ಕಾದ ಪವಿತ್ರ ಪ್ರಾರ್ಥನಾ ಗೃಹವೇ ಇರಲಿ... 
ಭಗವಂತನ ಹೆಜ್ಜೆ ಗುರುತುಗಳುಳ್ಳ ದೇವಾಲಯವೇ ಇರಲಿ.
ಅವ ರಚಿಸಿದ ಚಿತ್ರಿಕೆ ನಾನು....
ದೇವನು ಎಲ್ಲಿ ಹೇಗೇ ಅರ್ಚಿಸಿಕೊಳ್ಳಲಿ...
ಅರ್ಚನೆ ಸಲ್ಲುವುದು ನನ್ನ ದೈವಕ್ಕೇ...

"ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಚತಿ ", ಯಾವ ಹೆಸರಿನ ದೈವಕ್ಕೆ ಮಣಿದರೂ ಕೇಶವನಿಗೇ ಅದು ಸಲ್ಲುವುದು ಎನ್ನುವ ಭಾರತೀಯ ಪರಂಪರೆಯಲ್ಲಿ ಬೆಳೆದವಳು ಜೈಬುನ್ನಿಸಾ... ಅರಾಬಿಕ್ ಮತ್ತು ಪರ್ಶಿಯನ್ ಪಂಡಿತೆ...ವಿದ್ಯೆಯ ಪೂಜಕಿ.
೭ನೇ ವಯಸ್ಸಿನಲ್ಲೇ ಕುರಾನ್ ಬಾಯಿಪಾಠ ಮಾಡಿದ ಹುಡುಗಿ, ಆ ಪುಸ್ತಕಕ್ಕೆ ತನ್ನದೇ ಭಾಷ್ಯ ಬರೆಯ ಹೊರಟವಳು. ಮೂಲಭೂತವಾದಿ ಅಪ್ಪ ಅದಕ್ಕೆ  ಬಿಡಲಿಲ್ಲ. ಮತಾಂಧ ಅಪ್ಪ ಔರಂಗಜೇಬನಿಗಿಂತ, ದೊಡ್ಡಪ್ಪ ದಾರಾಶಿಕೋವಿನ ಹೃದಯವೈಶಾಲ್ಯದ ಮನಸ್ಥಿತಿಯವಳು ಜೈಬುನ್ನಿಸಾ... ಒಬ್ಬಳು ಸೂಫಿ಼...

ಅಂದಿನ ಮೊಘಲ್ ರಾಜಕಾರಣದ ಪರಂಪರೆಯೇ ಆದ ವಿದ್ರೋಹದಿಂದ ಪಟ್ಟಕ್ಕೆ ಬರುವ ಸಂಪ್ರದಾಯಕ್ಕೆ ಇಂಬು ಕೊಟ್ಟವಳು... ಅವಳಪ್ಪ ಔರಂಗಜೇಬ ಮಾಡಿದ್ದೂ ಅದೇ, ತನ್ನ ಅಣ್ಣ  ಅಕ್ಬರ್ ದ್ವಿತೀಯ, ಅಪ್ಪ ಔರಂಗಜೇಬನ ಮೇಲೆ ನಡೆಸಿದ ವಿಫಲ ವಿದ್ರೋಹವನ್ನು ಬೆಂಬಲಿಸಿದವಳು. ವಿದ್ರೋಹವನ್ನು ಅಪ್ಪ ಹೊಸಕಿ ಹಾಕಿದ... ಅಕ್ಬರ್ ದ್ವಿತೀಯ ಇರಾನಿಗೆ ಓಡಿ ಹೋಗಿ ಆಶ್ರಯ ಪಡೆದ... ಆದರೆ ಜೈಬುನ್ನಿಸಾ ಅಪ್ಪ ಔರಂಗಜೇಬನ ಅವಕೃಪೆಗೆ ತುತ್ತಾಗಿ ೨೦ ವರ್ಷ ಸೆರೆಯಲ್ಲಿ ಕಳೆದು ಸೆರೆಯಲ್ಲೇ ಸತ್ತ ರಾಜಕುಮಾರಿ...

Sunday 11 June 2017

ಚಿತ್ರಾಂಗದೆಯ ಸ್ವಗತ.



(ಗಂಭೀರ ದನಿಯಲ್ಲಿ)

ಬರುತ್ತಿದ್ದಾನಂತೆ ಅರ್ಜುನ....!
ನನ್ನನ್ನು ಸರಿಗಟ್ಟಿದ ಒಬ್ಬನೇ ಗಂಡು... ಅಶ್ವಮೇಧದ ಕುದುರೆಯ ಹಿಂದೆ ಬರುತ್ತಿದ್ದಾನಂತೆ... ಬರಲಿ... ನನ್ನ ವರ್ಷಗಳ ಕಾಯುವಿಕೆಗೆ ತಣಿವ ಕಾಲ ಬಂತು.

ನಾನು.. ಮಣಿಪುರದ ರಾಜಕುವರಿ... ಚಿತ್ರಾಂಗದೆ.. ನನ್ನಪ್ಪ ನನ್ನಲ್ಲಿ ವೀರನನ್ನು ಕಾಣಲಿಚ್ಚಿಸಿದರು.. ನಾನೆಂದೂ ಅವರಿಗೆ ನಿರಾಸೆ ಮಾಡಲಿಲ್ಲ. ಹೆಣ್ಣಾಗಿ ಹುಟ್ಟಿದರೂ ರಾಜಕುಮಾರನಂತೆ ಬೆಳೆದೆ. ಭೂಮಂಡಲದಲ್ಲೇ ನನ್ನ ಶೌರ್ಯವನ್ನು ಮೀರಿಸುವವರು ಯಾರೂ ಇರಲಿಲ್ಲ.... ಸುಕೋಮಲ ರಾಜಕುಮಾರಿಯರಂತೆ ಪಲ್ಲಕ್ಕಿಯಲ್ಲಿ ನಾ ಕೂತಿದ್ದೇ ಇಲ್ಲ.. ಗಂಡುಭೀರಿಯಂತೆ ಒಬ್ಬಳೇ ಕುದುರೆ ಹತ್ತಿ ಹೊರಡುತ್ತಿದ್ದೆ.

ಸಶಸ್ತ್ರ ಹೋರಾಟದಲ್ಲಿ ಎಂದಿಗೂ ಅಜೇಯಳು ನಾನು...


( ಕ್ಷಣಮೌನ... ಮೆಲುವಾದ ದನಿಯಲ್ಲಿ... ನೆನಪುಗಳಲ್ಲಿ ಜಾರುತ್ತಾ.....)

ಈ ಅಜೇಯ ರಾಜಕುವರಿಯ ಮನವನ್ನು ಜಯಿಸಿಬಿಟ್ಟ ಅವನು..... ಅರ್ಜುನ.
ಹೀಗೇ ಊರೂರು ಅಲೆಯುತ್ತಾ ಮಣಿಪುರಕ್ಕೆ ಬಂದ ಕುರುಕುಲದ ರಾಜಪುತ್ರ.. ಏನು ಮೋಹಕ ಮಾತು... ಎಂಥಹಾ ಮೋಡಿಯ ಮಾಟಗಾರ... ಸಾಮು ಮಾಡಿದ ದೇಹ... ಅಪ್ಪ ಸುರೇಂದ್ರನದೇ ನಿಲುಮೆ.

ನಾ ಮೃದುವಾದೆ... ಕೋಮಲವಾದೆ. ಅವನಿಗಾಗಿ.... ಎಂದೂ ಕಾಣದ ಸ್ತ್ರೀತ್ವದ ಸೋಪಾನವೇರಿದೆ...
ನನ್ನನ್ನೇ ನಾ ಅವನಿಗೆ ಕೊಟ್ಟುಕೊಂಡೆ... ಗಾಂಧರ್ವ ವಿವಾಹ ನಮ್ಮದು.  ನನ್ನನ್ನು ತನ್ನ ಪ್ರೇಮದಿಂದ ಗೆದ್ದುಬಿಟ್ಟ ಅವನು... ಸವ್ಯಸಾಚಿ ಅರ್ಜುನ.


( ಕ್ಷಣ ಮೌನ... ಆಮೇಲೊಂದು ನಿಟ್ಟುಸಿರು... ನೋವಿನ ದನಿಯಲ್ಲಿ ಮುಂದುವರಿಸುತ್ತಾಳೆ..)

ಹೇಗೆ ಬಂದನೋ ಹಾಗೇ ಕಣ್ಮರೆಯಾಗಿ ಹೋದ. ಮತ್ತೆಂದೂ ಬಾರದ ಹಾಗೆ... 
ನನ್ನ ಮೇಲೆ ಆರೋಪಗಳನ್ನು ಹೊರಿಸಿದನಂತೆ... 
ನನ್ನ ಮಗುವಿನ ತಂದೆ ಅವನಲ್ಲವಂತೆ...
ಎಂಥಾ ನೀಚ ಆರೋಪ ನನ್ನ ಮೇಲೆ.... ಮಣಿಪುರದ ಈ ಅರಸು ಕುಮಾರಿ ಪರಿತ್ಯಕ್ತಳಾಗಿ ಹೋದಳು..

ಅಮ್ಮನಿಗೆ ಕೊಡುವಷ್ಟೇ ಗೌರವವನ್ನು ಹೆಂಡತಿಗೂ ನೀಡಬೇಕು...  
ಹೆಂಡತಿಗೆ "ಜಾಯಾ" ಅಂದರೆ ಜನ್ಮದಾತೆ ಎಂದೂ ಹೆಸರು... 
ಹೆಂಡತಿ ಗಂಡನನ್ನು ಗಂಡ ಮತ್ತು ಮಗು ಎಂದು ಎರಡಾಗಿ ಸೀಳುವವಳು... ಗಂಡನಿಗೆ ಮಕ್ಕಳ ಮೂಲಕ ಮರುಹುಟ್ಟು ನೀಡುವ ತಾಯಿ...  ಆ ಗೌರವ ಅವನು ಕೊಡಲಿಲ್ಲ... ಈಗ ನನ್ನ ಮಗ ಬಭ್ರುವಾಹನ ನನಗೆ ಆ ಗೌರವವನ್ನು ತಂದುಕೊಡಬೇಕು.


(ಕ್ಷಣಮೌನ.. ಗಂಭೀರವಾದ ಧೃಢ ಸಂಕಲ್ಪದ ದನಿಯಲ್ಲಿ ಮುಂದುವರಿಯುತ್ತಾಳೆ...)

ಅಂದೇ ನಿರ್ಧರಿಸಿದೆ...  ಅರ್ಜುನನನ್ನು ಅರ್ಜುನನಲ್ಲದೇ ಇನ್ನಾರು ಸೋಲಿಸುವರು? ಅವನ ಮಗ.. ನನ್ನ ಬಭ್ರುವಾಹನ... ಅರ್ಜುನನದೇ ಪ್ರತಿರೂಪ. ಅವನದೇ ಶೌರ್ಯ... ಅವನಮ್ಮದೇ ಕೆಚ್ಚು,

ಅವನು ಬಭ್ರುವಾಹನನಿಗೆ ಸೋತ ದಿನ ಅವನು ಒಪ್ಪುತ್ತಾನೆ... ಅವನು ಒಪ್ಪಿದ ದಿನ ನನಗೆ ಅಪಮಾನದಿಂದ ಮುಕ್ತಿ.  ನನ್ನ ಮೇಲಿನ ಕಳಂಕ ಅಂದು ತೊಲಗುತ್ತದೆ... ತಯಾರು ಮಾಡಿದ್ದೇನೆ ಮಗನನ್ನು...

ಬರಲಿ...

ಬಭ್ರುವಾಹನನ ತಾಯಿಯಷ್ಟೇ ಅಲ್ಲ... ನಾ ಅವನ ಗುರುವೂ ಹೌದು... ಅವನಿಂದ ನಾ ಗುರುದಕ್ಷಿಣೆಯಲ್ಲಿ ಕೇಳಿದ್ದು ಅರ್ಜುನನ ಸೋಲು...

ಅರ್ಜುನನನ್ನು ಸಶಸ್ತ್ರ ಸಮರದಲ್ಲಿ ಹೆಡೆಮುರಿ ಕಟ್ಟಿ ತಂದೊಪ್ಪಿಸಬೇಕೆಂದು...

ತನ್ನ ತಂದೆ ಯಾರೆಂದು ಕೇಳುತ್ತಲೇ ಇದ್ದಾನೆ ಮಗ.... ಎಂದು ನನಗೆ ಅರ್ಜುನನ್ನು ಸೋಲಿಸಿ ತಂದೊಪ್ಪಿಸುವೆಯೋ ಅಂದೇ ನಿನ್ನ ತಂದೆಯ ಬಗ್ಗೆ ಹೇಳುವೆ ಎಂದು ಮಾತು ಕೊಟ್ಟಿದ್ದೇನೆ...

ಬಭ್ರುವಾಹನನಿಗೆ ಅವನ ತಂದೆಯ ಬಗ್ಗೆ ಕುತೂಹಲ... ಅರ್ಜುನನನ್ನು ತಂದೊಪ್ಪಿಸಿ ತಂದೆಯ ವಿವರ ತಿಳಿಯಲು ಅವನಿಗೂ ಕಾತರ...



(ಆತ್ಮವಿಶ್ವಾಸದ ದನಿಯಲ್ಲಿ....)

ರಹಸ್ಯೋಧ್ಘಾಟನೆಯ ಸಮಯ ಹತ್ತಿರ ಬರುತ್ತಿದೆ. ನನಗೆ ಅನುಮಾನವೇ ಇಲ್ಲ.... ಅರ್ಜುನನ ಮಗ, ಅರ್ಜುನನ ಮಗನೆಂಬುದನ್ನು ಶ್ರುತಪಡಿಸುತ್ತಾನೆ... ನನ್ನ ಕಾಲಡಿ ಅರ್ಜುನನನ್ನು ತಂದು ಕೆಡವುತ್ತಾನೆ...
ಅವನನ್ನು ಎತ್ತಿ ಉಪಚರಿಸಲು ಸಿದ್ದಳಾಗಬೇಕಷ್ಟೇ....
ಹೇಳುತ್ತೇನೆ ಅವನಿಗೆ... "ಮಣಿಪುರಕ್ಕೆ ಸಪ್ರೇಮ ಸ್ವಾಗತ ಅರ್ಜುನ..., ಕುಶಲವೇ...! ಕ್ಷೇಮವೇ....!"
ಕೇಳುತ್ತೇನೆ...... "ನಿನ್ನ ಮಗನ ಬಗ್ಗೆ ಹೆಮ್ಮೆಯಿಲ್ಲವೇ...!"