Sunday 11 June 2017

ಚಿತ್ರಾಂಗದೆಯ ಸ್ವಗತ.



(ಗಂಭೀರ ದನಿಯಲ್ಲಿ)

ಬರುತ್ತಿದ್ದಾನಂತೆ ಅರ್ಜುನ....!
ನನ್ನನ್ನು ಸರಿಗಟ್ಟಿದ ಒಬ್ಬನೇ ಗಂಡು... ಅಶ್ವಮೇಧದ ಕುದುರೆಯ ಹಿಂದೆ ಬರುತ್ತಿದ್ದಾನಂತೆ... ಬರಲಿ... ನನ್ನ ವರ್ಷಗಳ ಕಾಯುವಿಕೆಗೆ ತಣಿವ ಕಾಲ ಬಂತು.

ನಾನು.. ಮಣಿಪುರದ ರಾಜಕುವರಿ... ಚಿತ್ರಾಂಗದೆ.. ನನ್ನಪ್ಪ ನನ್ನಲ್ಲಿ ವೀರನನ್ನು ಕಾಣಲಿಚ್ಚಿಸಿದರು.. ನಾನೆಂದೂ ಅವರಿಗೆ ನಿರಾಸೆ ಮಾಡಲಿಲ್ಲ. ಹೆಣ್ಣಾಗಿ ಹುಟ್ಟಿದರೂ ರಾಜಕುಮಾರನಂತೆ ಬೆಳೆದೆ. ಭೂಮಂಡಲದಲ್ಲೇ ನನ್ನ ಶೌರ್ಯವನ್ನು ಮೀರಿಸುವವರು ಯಾರೂ ಇರಲಿಲ್ಲ.... ಸುಕೋಮಲ ರಾಜಕುಮಾರಿಯರಂತೆ ಪಲ್ಲಕ್ಕಿಯಲ್ಲಿ ನಾ ಕೂತಿದ್ದೇ ಇಲ್ಲ.. ಗಂಡುಭೀರಿಯಂತೆ ಒಬ್ಬಳೇ ಕುದುರೆ ಹತ್ತಿ ಹೊರಡುತ್ತಿದ್ದೆ.

ಸಶಸ್ತ್ರ ಹೋರಾಟದಲ್ಲಿ ಎಂದಿಗೂ ಅಜೇಯಳು ನಾನು...


( ಕ್ಷಣಮೌನ... ಮೆಲುವಾದ ದನಿಯಲ್ಲಿ... ನೆನಪುಗಳಲ್ಲಿ ಜಾರುತ್ತಾ.....)

ಈ ಅಜೇಯ ರಾಜಕುವರಿಯ ಮನವನ್ನು ಜಯಿಸಿಬಿಟ್ಟ ಅವನು..... ಅರ್ಜುನ.
ಹೀಗೇ ಊರೂರು ಅಲೆಯುತ್ತಾ ಮಣಿಪುರಕ್ಕೆ ಬಂದ ಕುರುಕುಲದ ರಾಜಪುತ್ರ.. ಏನು ಮೋಹಕ ಮಾತು... ಎಂಥಹಾ ಮೋಡಿಯ ಮಾಟಗಾರ... ಸಾಮು ಮಾಡಿದ ದೇಹ... ಅಪ್ಪ ಸುರೇಂದ್ರನದೇ ನಿಲುಮೆ.

ನಾ ಮೃದುವಾದೆ... ಕೋಮಲವಾದೆ. ಅವನಿಗಾಗಿ.... ಎಂದೂ ಕಾಣದ ಸ್ತ್ರೀತ್ವದ ಸೋಪಾನವೇರಿದೆ...
ನನ್ನನ್ನೇ ನಾ ಅವನಿಗೆ ಕೊಟ್ಟುಕೊಂಡೆ... ಗಾಂಧರ್ವ ವಿವಾಹ ನಮ್ಮದು.  ನನ್ನನ್ನು ತನ್ನ ಪ್ರೇಮದಿಂದ ಗೆದ್ದುಬಿಟ್ಟ ಅವನು... ಸವ್ಯಸಾಚಿ ಅರ್ಜುನ.


( ಕ್ಷಣ ಮೌನ... ಆಮೇಲೊಂದು ನಿಟ್ಟುಸಿರು... ನೋವಿನ ದನಿಯಲ್ಲಿ ಮುಂದುವರಿಸುತ್ತಾಳೆ..)

ಹೇಗೆ ಬಂದನೋ ಹಾಗೇ ಕಣ್ಮರೆಯಾಗಿ ಹೋದ. ಮತ್ತೆಂದೂ ಬಾರದ ಹಾಗೆ... 
ನನ್ನ ಮೇಲೆ ಆರೋಪಗಳನ್ನು ಹೊರಿಸಿದನಂತೆ... 
ನನ್ನ ಮಗುವಿನ ತಂದೆ ಅವನಲ್ಲವಂತೆ...
ಎಂಥಾ ನೀಚ ಆರೋಪ ನನ್ನ ಮೇಲೆ.... ಮಣಿಪುರದ ಈ ಅರಸು ಕುಮಾರಿ ಪರಿತ್ಯಕ್ತಳಾಗಿ ಹೋದಳು..

ಅಮ್ಮನಿಗೆ ಕೊಡುವಷ್ಟೇ ಗೌರವವನ್ನು ಹೆಂಡತಿಗೂ ನೀಡಬೇಕು...  
ಹೆಂಡತಿಗೆ "ಜಾಯಾ" ಅಂದರೆ ಜನ್ಮದಾತೆ ಎಂದೂ ಹೆಸರು... 
ಹೆಂಡತಿ ಗಂಡನನ್ನು ಗಂಡ ಮತ್ತು ಮಗು ಎಂದು ಎರಡಾಗಿ ಸೀಳುವವಳು... ಗಂಡನಿಗೆ ಮಕ್ಕಳ ಮೂಲಕ ಮರುಹುಟ್ಟು ನೀಡುವ ತಾಯಿ...  ಆ ಗೌರವ ಅವನು ಕೊಡಲಿಲ್ಲ... ಈಗ ನನ್ನ ಮಗ ಬಭ್ರುವಾಹನ ನನಗೆ ಆ ಗೌರವವನ್ನು ತಂದುಕೊಡಬೇಕು.


(ಕ್ಷಣಮೌನ.. ಗಂಭೀರವಾದ ಧೃಢ ಸಂಕಲ್ಪದ ದನಿಯಲ್ಲಿ ಮುಂದುವರಿಯುತ್ತಾಳೆ...)

ಅಂದೇ ನಿರ್ಧರಿಸಿದೆ...  ಅರ್ಜುನನನ್ನು ಅರ್ಜುನನಲ್ಲದೇ ಇನ್ನಾರು ಸೋಲಿಸುವರು? ಅವನ ಮಗ.. ನನ್ನ ಬಭ್ರುವಾಹನ... ಅರ್ಜುನನದೇ ಪ್ರತಿರೂಪ. ಅವನದೇ ಶೌರ್ಯ... ಅವನಮ್ಮದೇ ಕೆಚ್ಚು,

ಅವನು ಬಭ್ರುವಾಹನನಿಗೆ ಸೋತ ದಿನ ಅವನು ಒಪ್ಪುತ್ತಾನೆ... ಅವನು ಒಪ್ಪಿದ ದಿನ ನನಗೆ ಅಪಮಾನದಿಂದ ಮುಕ್ತಿ.  ನನ್ನ ಮೇಲಿನ ಕಳಂಕ ಅಂದು ತೊಲಗುತ್ತದೆ... ತಯಾರು ಮಾಡಿದ್ದೇನೆ ಮಗನನ್ನು...

ಬರಲಿ...

ಬಭ್ರುವಾಹನನ ತಾಯಿಯಷ್ಟೇ ಅಲ್ಲ... ನಾ ಅವನ ಗುರುವೂ ಹೌದು... ಅವನಿಂದ ನಾ ಗುರುದಕ್ಷಿಣೆಯಲ್ಲಿ ಕೇಳಿದ್ದು ಅರ್ಜುನನ ಸೋಲು...

ಅರ್ಜುನನನ್ನು ಸಶಸ್ತ್ರ ಸಮರದಲ್ಲಿ ಹೆಡೆಮುರಿ ಕಟ್ಟಿ ತಂದೊಪ್ಪಿಸಬೇಕೆಂದು...

ತನ್ನ ತಂದೆ ಯಾರೆಂದು ಕೇಳುತ್ತಲೇ ಇದ್ದಾನೆ ಮಗ.... ಎಂದು ನನಗೆ ಅರ್ಜುನನ್ನು ಸೋಲಿಸಿ ತಂದೊಪ್ಪಿಸುವೆಯೋ ಅಂದೇ ನಿನ್ನ ತಂದೆಯ ಬಗ್ಗೆ ಹೇಳುವೆ ಎಂದು ಮಾತು ಕೊಟ್ಟಿದ್ದೇನೆ...

ಬಭ್ರುವಾಹನನಿಗೆ ಅವನ ತಂದೆಯ ಬಗ್ಗೆ ಕುತೂಹಲ... ಅರ್ಜುನನನ್ನು ತಂದೊಪ್ಪಿಸಿ ತಂದೆಯ ವಿವರ ತಿಳಿಯಲು ಅವನಿಗೂ ಕಾತರ...



(ಆತ್ಮವಿಶ್ವಾಸದ ದನಿಯಲ್ಲಿ....)

ರಹಸ್ಯೋಧ್ಘಾಟನೆಯ ಸಮಯ ಹತ್ತಿರ ಬರುತ್ತಿದೆ. ನನಗೆ ಅನುಮಾನವೇ ಇಲ್ಲ.... ಅರ್ಜುನನ ಮಗ, ಅರ್ಜುನನ ಮಗನೆಂಬುದನ್ನು ಶ್ರುತಪಡಿಸುತ್ತಾನೆ... ನನ್ನ ಕಾಲಡಿ ಅರ್ಜುನನನ್ನು ತಂದು ಕೆಡವುತ್ತಾನೆ...
ಅವನನ್ನು ಎತ್ತಿ ಉಪಚರಿಸಲು ಸಿದ್ದಳಾಗಬೇಕಷ್ಟೇ....
ಹೇಳುತ್ತೇನೆ ಅವನಿಗೆ... "ಮಣಿಪುರಕ್ಕೆ ಸಪ್ರೇಮ ಸ್ವಾಗತ ಅರ್ಜುನ..., ಕುಶಲವೇ...! ಕ್ಷೇಮವೇ....!"
ಕೇಳುತ್ತೇನೆ...... "ನಿನ್ನ ಮಗನ ಬಗ್ಗೆ ಹೆಮ್ಮೆಯಿಲ್ಲವೇ...!"